ಕಪಿಲ್ : ವಿಷಾದದ ವಿದಾಯ

ಕಪಿಲ್ : ವಿಷಾದದ ವಿದಾಯ

ಕೊನೆಗೂ ಕಪಿಲ್‌ದೇವ್ ನಿವೃತ್ತಿ ಘೋಷಿಸಬೇಕಾಯಿತು. ಈ ನಿವೃತ್ತಿ ಘೋಷಣೆ ಹೊರಟ ಸನ್ನಿವೇಶವನ್ನು ಅವಲೋಕಿಸಿದರೆ ನಮ್ಮ ದೇಶದ ಮಹಾನ್ ಆಟಗಾರನೊಬ್ಬನನ್ನು ಕ್ರಿಕೆಟ್ ಕ್ರೀಡಾಂಗಣದಿಂದ ಗೌರವಯುತವಾಗಿ ಬೀಳ್ಕೊಡಲಿಲ್ಲ ಎಂಬ ಸಂಕಟವುಂಟಾಗುತ್ತದೆ. ಕಪಿಲ್ ಇಂದಲ್ಲ ನಾಳೆ ನಿವೃತ್ತಿಯಾಗಬೇಕಿತ್ತು. ಆದರೆ ಅವರು ವಿಕೆಟ್ಗಳಿಕೆಯಲ್ಲಿ ವಿಶ್ವದಾಖಲೆ ಮಾಡಿದ ಮಾರನೇ ದಿನದಿಂದಲೇ ನಿವೃತ್ತಿ ಒತ್ತಡ ಹೇರುತ್ತ ಬಂದ ವಾತಾವರಣವು ನಿಜಕ್ಕೂ ವಿಷಾದ ಉಕ್ಕಿಸುತ್ತದೆ. ದಾಖಲೆ ಮಾಡಿದ ಮರುಗಳಿಗೆಯೇ ನಿವೃತ್ತಿ ಘೋಷಿಸಬೇಕಿತ್ತೆಂದು ಕಾದು ಕೂತ ಕಿವಿಗಳಿಗೆ ನಿರಾಶೆಯುಂಟು ಮಾಡಿದ ಕಪಿಲ್‌ ಇನ್ನಷ್ಟು ಕಾಲ ಚೆನ್ನಾಗಿ ಆಡಿ, ಅನಂತರ ನಿವೃತ್ತರಾಗುವ ಅಪೇಕ್ಷೆ ಹೊಂದಿದ್ದು ಸ್ಪಷ್ಟವೇ ಆಗಿತ್ತು. ಆದರೆ ಅವರ ರಕ್ತ ಮಾಂಸಕ್ಕಾಗಿ ಕಾದು ಕೂತ ಕೆಲವರು, ಯುವಕರಿಗೆ ಅವಕಾಶ ಕೊಡಲು ನಿವೃತ್ತರಾಗಬೇಕೆಂದೂ, ಕಪಿಲ್ ಖಾಲಿಯಾಗಿದ್ದಾರೆಂದೂ ವಿವಿಧ ಕಾರಣ ನೀಡುತ್ತದೆ ಒತ್ತಡ ಹೇರತೊಡಗಿದರು. ಮಹಾನ್ ಆಟಗಾರನೊಬ್ಬ ತಾನು ಬೆಳೆಯುವ ಜೊತೆಗೆ ಕ್ರಿಕೆಟ್ ಕ್ರೀಡೆಯನ್ನು ಬೆಳೆಸಿ ದೇಶಕ್ಕೆ ಗೌರವ ತಂದಿದ್ದನ್ನು ಮರೆತ ಕೆಲವರು ‘ಕಪಿಲ್ ಮರ್ಯಾದೆಯಿಂದ ನಿವೃತ್ತಿಯಾಗಬೇಕು’ ಎಂದು ಮರ್‍ಯಾದೆಹೀನರಾಗಿ ಮಾತಾಡಿದರು. ಕೆಟ್ಟ ಆಟ ಆಡುತ್ತಲೇ ಕಪಿಲ್ ಕ್ರಿಕೆಟ್ ಕ್ರೀಡಾಂಗಣಕ್ಕೆ ಭಾರವಾಗಿರಬೇಕೆಂದು ನಾನು ವಾದಿಸುತ್ತಿಲ್ಲ. ಸ್ವತಃ ಕಪಿಲ್ ಅವರೇ ೧೯೯೨ ರಲ್ಲಿ ಸ್ಪಷ್ಟವಾಗಿ ಒಂದು ಮಾತು ಹೇಳಿದ್ದರು:

‘ನಾನು ಇನ್ನೊಬ್ಬ ಆಟಗಾರನ ಅವಕಾಶಕ್ಕೆ ಸಂಚಕಾರ ತರುವ ರೀತಿಯಲ್ಲಿ ಉಳಿದುಕೊಳ್ಳುವುದಿಲ್ಲ. ಆಟವಾಡುವ ಅರ್ಹತೆಯಿಂದಲೇ ಮತ್ತಷ್ಟು ಕಾಲ ಆಡಲು ಶಿಸ್ತು ಮತ್ತು ಶ್ರಮಕ್ಕೆ ಬದ್ಧನಾಗಿರುತ್ತೇನೆ’.

ಕಪಿಲ್ ನನ್ನ ಮಾತಿಗೆ ವಂಚನೆ ಮಾಡಲಿಲ್ಲ. ದಾಖಲೆ ನಿರ್ಮಿತಿಯ ಸಾಧನೆಗಾಗಿ ಮತ್ತು ಕ್ರಿಕೆಟ್ ಕ್ರೀಡೆಗಾಗಿ ಶಿಸ್ತಿನಿಂದ ವರ್ತಿಸಿದರು. ಯಾರೇ ನಾಯಕರಾಗಿದ್ದರು ಸರಿ, ಸಣ್ಣ ತಕರಾರು ಮಾಡಲ್ಲ, ಅಹಂಕಾರದಿಂದ ನಡೆದುಕೊಳ್ಳದೆ ಆಟಕ್ಕೆ ಗಮನ ಕೊಟ್ಟರು, ಹಿರಿಯರನ್ನು ಪ್ರೀತಿಯಿಂದ ಕಂಡುಕೊಂಡರು. ‘ಕ್ರಿಕೆಟ್ ನನ್ನ ರಕ್ತದಲ್ಲಿದೆ’ ಎಂದು ಹೇಳುತ್ತಿದ್ದ ಕಪಿಲ್ ಅದರಂತೆಯೇ ನಡೆದುಕೊಂಡರು. ಅವರು ಎಂದೂ, ಆಟಕ್ಕೆ ವಂಚನೆ ಮಾಡಲಿಲ್ಲ. ಆತ್ಮವಂಚನೆಯನ್ನೂ ಮಾಡಿಕೊಳ್ಳಲಿಲ್ಲ. ಆದರೆ ಕಪಿಲ್‌ರ ಕ್ರಿಕೆಟ್ ಕ್ರೀಡೆಯ ದಿನಗಳಲ್ಲಿ ಅವರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂಬ ವಿಷಾದ ಅವರಲ್ಲಿ ಆವರಿಸಿದೆಯೆಂದೇ ನನ್ನ ತಿಳುವಳಿಕೆ. ನನ್ನ ಈ ತಿಳುವಳಿಕೆ ಕಾರಣವಿದೆ. ವಾಸ್ತವವಾಗಿ ಕಪಿಲ್ ಅವರಿಗೆ ಮುಂದಿನ ವಿಶ್ವಕಪ್ ಕ್ರಿಕೆಟ್ ವರೆಗೆ ಅಡುವ ಆಸೆ ಇದ್ದಂತಿತ್ತು. ೧೯೯೨ ರಲ್ಲಿ ಪ್ರಕಟವಾದ ಪುಸ್ತಕವೊಂದರಲ್ಲಿ ಕಪಿಲ್ ತನ್ನ ಕ್ರಿಕೆಟ್ ಅವಧಿಯ ಬಗ್ಗೆ ಹೇಳುತ್ತ, “ನನ್ನ ಶ್ರಮ ಮತ್ತು ಕ್ರೀಡಾ ಬದ್ಧತೆಯಿಂದ ಕನಿಷ್ಠ ಮೂರು ಅಥವಾ ನಾಲ್ಕು ವರ್ಷಗಳವರೆಗೆ ಕ್ರಿಕೆಟ್ ಆಡುತ್ತೇನೆ” ಎಂದು ಆತ್ಮವಿಶ್ವಾಸದಿಂದ ಹೇಳಿದ್ದರು. ವಿಕೆಟ್ ಗಳಿಕೆಯಲ್ಲಿ ವಿಶ್ವ ದಾಖಲೆ ಮಾಡಿದ ನಂತರ ಉಂಟಾದ ಹೊರಗಿನ ಒತ್ತಡಕ್ಕೆ ಸಿಲುಕಿ ಒಳಗೆ ಒದ್ದಾಡುತ್ತಿದ್ದ ಕಪಿಲ್ ಗೊಂದಲಕ್ಕೆ ಬಿದ್ದಂತೆ ಆಟವಾಡ ತೊಡಗಿದರು. ಹೀರೊಕಪ್‌ನ ಒಂದು ಪಂದ್ಯದಲ್ಲಿ ಸರಿಯಾಗಿ ಆಡದೆ ಇದ್ದಾಗ ಕಪಿಲ್ ತನ್ನನ್ನು ಒಂದೇ ಪಂದ್ಯದಿಂದ ಕೈ ಬಿಡಬಹುದೆಂದು ತನ್ನನ್ನು ಹೊರೆಯೆಂದು ಭಾವಿಸುವ ಸಂದರ್ಭ ಒದಗಬಾರದೆಂದೂ ಕೇಳಿಕೊಂಡಿದ್ದಾರೆ. ಆದರೆ ಹೀರೊಕಪ್ ಫೈನಲ್‌ನಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿ ಟೀಕಾಕಾರರ ಬಾಯಿ ಮುಚ್ಚಿಸಿದರು. ಆ ನಂತರ ‘ವಿಶ್ರಾಂತಿ’ಯ ನೆಪ ನೀಡಿ ಷಾರ್‍ಜಾ ಕಪ್ ಪಂದ್ಯಾವಳಿಗೆ ಕಪಿಲ್‌ರನ್ನು ಆಯ್ಕೆ ಮಾಡಲಿಲ್ಲ. ಕಪಿಲ್‌ರನ್ನು ಕೈಬಿಟ್ಟರೆ ಹೇಗೆಂದು ಪರೀಕ್ಷಿಸಿ ನೋಡುವ ಪ್ರಯತ್ನದ ಫಲವಾಗಿ ಆಯ್ಕೆ ಮಂಡಲಿಗೆ ‘ವಿಶ್ರಾಂತಿ’ ಕಾರಣ ಒಂದು ವರವಾಗಿ ಬಂದಿತ್ತು.

ಹಿಂದೆ, ಇದೇ ಕಪಿಲ್‌ರನ್ನು ಅಜರುದ್ದೀನ್ ಜಾಗದಲ್ಲಿ ಮತ್ತೆ ನಾಯಕರನ್ನಾಗಿಸುವ ಮನಸ್ಸು ಮಾಡಿ, ಪರೋಕ್ಷ ಸೂಚನೆ ನೀಡಿ, ಕೈಕೊಡುವ ಘಟನೆಯೂ ಜರುಗಿಹೋಗಿತ್ತು. ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಭಾರತದ ತಂಡ ಹೀನಾಯವಾಗಿ ಆಡಿದಾಗ ಅಜರುದ್ದಿನ್ ಅವರನ್ನು ಕೈಬಿಟ್ಟು ಕಪಿಲ್ ರನ್ನ ನಾಯಕತ್ವಕ್ಕೆ ತರುವ ಸೂಚನೆ ನೀಡಿದ ಕ್ರಿಕೆಟ್ ಮಂಡಳಿ ಅಧಿಕಾರಿಗಳು ಆಯ್ಕೆ ಸಮಿತಿಯ ಸಭೆ ಮುಗಿಯುವವರೆಗೂ ಹೋಟೆಲ್‌ನಲ್ಲಿ ಕಾಯುತ್ತಿರುವಂತೆ ಹೇಳಿದರು. ದಕ್ಷಿಣ ಆಫ್ರಿಕಾ ಪ್ರವಾಸದಿಂದ ಹಿಂತಿರುಗಿದ ಕೂಡಲೇ ಬಾಂಬೆಯ ಹೋಟೆಲ್‌ನಲ್ಲಿ ಮತ್ತೆ ನಾಯಕನಾಗುವ ಲೆಕ್ಕಾಚಾರದಲ್ಲಿ ಕಪಿಲ್ ಕಾಯುತ್ತಿದ್ದಾಗ, ಅಲ್ಲಿ ವಾಡೇಕರ್ ಅವರು ಅಜರುದ್ದಿನ್ ಸಹಾಯಕ್ಕೆ ಬಂದಿದ್ದರು. ಇದಕ್ಕೂ ಮುಂಚೆ ಕಪಿಲ್ ಸ್ವತಃ ಅಜರುದ್ದೀನ್‌ಗೆ ಫೋನ್ ಮಾಡಿ “ನಿನ್ನನ್ನು ಕಿತ್ತುಹಾಕಿ ನನಗೆ ಕ್ಯಾಪ್ಟನ್ ಗಿರಿ ಕೊಟ್ಟರೆ ನಾನು ಒಪ್ಪಿಕೊಳ್ಳುವುದಿಲ್ಲ. ನಿನ್ನನ್ನು ಒಪ್ಪಿಸಿದರೆ ಅಥವಾ ನೀನೇ ನಾಯಕತ್ವದಿಂದ ದೂರ ಸರಿದರೆ ಮಾತ್ರ ಒಪ್ಪಿಕೊಳ್ಳುವೆ” ಎಂದಿದ್ದಾರೆ. ಹೀಗೆ ಸೌಜನ್ಯದಿಂದ ವರ್ತಿಸಿದ ಕಪಿಲ್‌ಗೆ ಮತ್ತೆ ನಾಯಕತ್ವ ಬರಲಿಲ್ಲ. ಅದಕ್ಕೆ ಬದಲಾಗಿ ಇತ್ತೀಚೆಗೆ ತಮ್ಮ ದೈಹಿಕ ಅರ್ಹತೆಯನ್ನು ಸಾಬೀತುಪಡಿಸಬೇಕೆಂಬ ಒತ್ತಡವನ್ನು ವಾಡೇಕರ್‌ ತಂದಿದ್ದರೆಂಬ ವರದಿಗಳು ಬಂದವು. ಒಟ್ಟಿನಲ್ಲಿ ಇತ್ತೀಚೆಗೆ ಕಪಿಲ್ ಕ್ರಿಕೆಟ್ ತಂಡಕ್ಕೆ ಭಾರವಾಗುತ್ತಿದ್ದಾರೆಂಬ ಭಾವನೆ ಬೆಳೆಯುವಂತೆ ಮಾಡುತ್ತ ಬಲಿ ತೆಗೆದುಕೊಳ್ಳುವ ಹವಣಿಕೆ ಸೂಕ್ಷ್ಮಸ್ತರದಲ್ಲಿ ಕೆಲಸ ಮಾಡುತ್ತಿತ್ತು. ಇದಕ್ಕೆ ಸಹಾಯಕವಾಗುವಂತೆ ಇತ್ತೀಚೆಗೆ ನಡೆದ ವೆಸ್ಟ್ ಇಂಡೀಸ್ ಜೊತೆಗಿನ ಮೊದಲ ಒಂದು ದಿನದ ಅಂತರಾಷ್ಟ್ರೀಯ ಪಂದ್ಯದಲ್ಲಿ ಕಪಿಲ್ ತುಂಬಾ ದುಬಾರಿಯಾಗುವಂತೆ ಬೌಲ್ ನೀಡಿದರು. ಕಾಲಿನ ಸ್ನಾಯು ಸೆಳೆತಕ್ಕೆ ಸಿಕ್ಕಿದ್ದ ಅವರನ್ನು ಮೊದಲ ಪಂದ್ಯದಲ್ಲಿ ಆಡಿಸದೆ ಇರಬಹುದಿತ್ತು. ಆದರೆ ಹಾಗಾಗಲಿಲ್ಲ. ಎಷ್ಟೋ ಸಾರಿ ಪಂದ್ಯದಲ್ಲಿದ್ದರೂ ಕಪಿಲ್‌ಗೆ ಸೂಕ್ತ ಬೌಲಿಂಗ್ ಅವಕಾಶವನ್ನು ಕೊಡುತ್ತಿರಲಿಲ್ಲ. ಹೀಗೆ ದೈಹಿಕ-ಮಾನಸಿಕ ಒತ್ತಡದಲ್ಲಿ ಒಂದು ಪಂದ್ಯದಲ್ಲಿ ದುಬಾರಿಯಾದ ಕಪಿಲ್‌ರನ್ನು ಕೈಬಿಡಲು ಉತ್ತಮ ವಾತಾವರಣ ನಿರ್ಮಾಣವಾಯಿತು. ವೆಸ್ಟ್ ಇಂಡೀಸ್, ನ್ಯೂಜಿಲೆಂಡ್ ಮತ್ತು ಭಾರತ ತ್ರಿಕೋನ ಸರಣಿ ಕಪಿಲ್ ಇರುತ್ತಾರೆಂಬ ಸುದ್ದಿಯ ಹಿಂದೆಯೇ ಕೈ ಬಿಟ್ಟ ಅಧಿಕೃತ ಪ್ರಕಟಣೆ ಹೊರಬಿತ್ತು. ಈಗ ನಡೆಯುತ್ತಿರುವ ಇಸ್ಟ್ ಇಂಡೀಸ್ ಜೊತೆಗಿನ ಪಂದ್ಯಾವಳಿ ಕೊನೆಯಲ್ಲಿ ನಿವೃತ್ತಿ ಘೋಷಿಸಲು ಮನಸ್ಸು ಮಾಡಿದರೆನ್ನಲಾದ ಕಪಿಲ್ ಒಂದು ವಾರದ ಹಿಂದೆ ‘ಈ ಕೂಡಲೇ ನಿವೃತ್ತಿಯಾಗುವ ಯೋಚನೆಯಿಲ್ಲ’ ಎಂದು ಹೇಳಿದ್ದರು. ಆದರೆ ಬೆಳೆಯುತ್ತ ಬಂದ ಒಳಹೊರಗಿನ ಒತ್ತಡಗಳ ಫಲವಾಗಿ ನಿವೃತ್ತಿಯನ್ನು ಘೋಷಿಸಿಯೇ ಬಿಟ್ಟರು.

ಒಂದು ವಿಪರ್ಯಾಸ ಸಂಗತಿಯೆಂದರೆ ತಾನು ತುಂಬಾ ಇಷ್ಟ ಪಡುತ್ತಿದ್ದ ಜಿ. ಆರ್. ವಿಶ್ವನಾಥ್ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದಾಗಲೇ ಕಪಿಲ್ ಕಷ್ಟದ ದಿನಗಳನ್ನು ಎದುರಿಸಿದರು; ಒಳಹೊರಗಿನ ಒತ್ತಡಗಳಿಂದ ಗೊಂದಲಕ್ಕೆ ಬಿದ್ದು ‘ಬಲಿ’ಯಾದರು. ವಿಶ್ವನಾಥ್ ಬಗ್ಗೆ ಕಪಿಲ್ ಹೇಳಿದ್ದ ಮಾತುಗಳು ಕಪಿಲ್ ಬಗ್ಗೆ ಹೆಚ್ಚು ಗೌರವ ಮೂಡಿಸುತ್ತವೆ : ‘ವಿಶ್ವನಾಥ್ ನನ್ನ ಹೀರೋ. ಅವರು ಉತ್ತಮ ಆಟಗಾರ ಮತ್ತು ಉತ್ತಮ ಮನುಷ್ಯ. ವಿಶ್ವನಾಥ್ ನಂತರ ನಾನು ಇನ್ನೊಬ್ಬ ಆಟಗಾರರನ್ನು ಯೋಚಿಸಲಾರೆ. ನಾನು ಬದುಕಿರುವವರೆಗೂ ಇದು ಸತ್ಯ’.

ವಿಶ್ವನಾಥ್ ಬಗ್ಗೆ ಕಪಿಲ್ ವ್ಯಕ್ತಪಡಿಸಿದ ಮುಕ್ತ ಪ್ರಶಂಸೆಯ ಮುಚ್ಚುಮರೆ ಇಲ್ಲದ ಆತನ ಸ್ವಭಾವಕ್ಕೆ ಸಾಕ್ಷಿಯಾಗಿದೆ. ಒಳಗೊಂದು ಹೊರಗೊಂದು ಮಾತನಾಡದ ಕಪಿಲ್ ನೇರ ನಡೆ ನುಡಿ ಮನುಷ್ಯ. ಸ್ವತಃ ದೊಡ್ಡ ಹೀರೋ ಆಗಿದ್ದು ಇನ್ನೊಬ್ಬ ಆಟಗಾರರನ್ನು ಹೀರೋ ಎಂದು ಕರೆಯಲು ಹಿಂಜರಿಯದ ಅಪ್ಪಟ ಮನಸ್ಸಿನ ಮನುಷ್ಯ. ಈ ಮನುಷ್ಯ ನಮ್ಮ ದೇಶದ ಕ್ರಿಕೆಟ್ಟಿಗೆ ಬಿರುಸು, ಬಲ ಮತ್ತು ಬೆಲೆಯನ್ನು ತಂದುಕೊಟ್ಟ ಶಕ್ತಿಶಾಲಿ, ನಿಧಾನಗತಿಯ ಆಟದಿಂದ ನಿದ್ರಾಪ್ರೇಮಿಗಳಾಗುತ್ತಿದ್ದ ನನ್ನಂಥ ಅಸಂಖ್ಯಾತರನ್ನು ಮತ್ತೆ ಕ್ರಿಕೆಟ್ ಪ್ರೇಮಿಗಳನ್ನಾಗಿಸಿದ ‘ಮಾಂತ್ರಿಕ’. ಆದರೆ ಈ ಮಹಾನ್ ಆಟಗಾರರನ್ನು ನಮ್ಮ ದೇಶ ಚೆನ್ನಾಗಿ ನಡೆಸಿಕೊಂಡಿದೆಯೇ? ಈ ಪ್ರಶ್ನೆಗೆ ಒಂದು ಸಾಲಿನ ಉತ್ತರ ಸಾಧ್ಯವಿಲ್ಲ.

ಕಪಿಲ್ ಕ್ರಿಕೆಟ್ ಮೂಲಕ ನಮ್ಮ ದೇಶವು ಅಪಾರ ಆಸ್ತಿ ಪಾಸ್ತಿಯನ್ನು ಕೊಟ್ಟಿದೆ. ಅಥವಾ ಕಪಿಲ್ ಅದನ್ನು ಗಳಿಸಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಈ ದೇಶ ಲಕ್ಷಾಂತರ ಅಭಿಮಾನಿಗಳನ್ನು ಕೊಟ್ಟಿದೆ. ಬಿಳಿ ಬುದ್ಧಿವಂತರ ಮೂಲಕ ಅನಪೇಕ್ಷಿತ ಟೀಕೆಯನ್ನು ಕೊಟ್ಟಿದೆ. ಕಪಿಲ್ ನಾಯಕತ್ವವನ್ನು ಟೀಕಿಸತೊಡಗಿದ್ದು ಬಿಳಿ ಬುದ್ದಿವಂತರ ಪ್ರಮುಖ ಅಸ್ತ್ರವಾಗಿದೆ. ‘ಕಪಿಲ್ ಅತ್ಯುತ್ತಮ ಆಟಗಾರ ಆದರೆ ಉತ್ತಮ ನಾಯಕನಲ್ಲ’ ಎಂದು ಸಾರುತ್ತಾ ಬಂದ ಬುದ್ಧಿವಂತಿಕೆಯ ಮಾತನ್ನು ನೆನೆದಾಗಲೆಲ್ಲ ಕುವೆಂಪು ಅವರನ್ನು ಕುರಿತು ಕೆಲವು ಕನ್ನಡ ವಿಮರ್ಶಕರು ಅತ್ಯುತ್ತಮ ಕಾದಂಬರಿಕಾರರು; ಆದರೆ ಉತ್ತಮ ಕವಿಯಲ್ಲ’ ಎಂದು ಹೇಳತೊಡಗಿದ್ದು ಜ್ಞಾಪಕಕ್ಕೆ ಬರುತ್ತದೆ. ಕೊಟ್ಟಿಗೆಯಿಂದ ಬಂದ ಕುವೆಂಪು, ಕಟ್ಟಿಗೆ ಡಿಪೋದಿಂದ ಬಂದ ಕಪಿಲ್ ಇಬ್ಬರೂ ಹೆಚ್ಚೂಕಡಿಮೆ ಒಂದೇ ರೀತಿಯ ಟೀಕೆ ಒಳಗಾದದ್ದಕ್ಕೆ, ಕಾವ್ಯದಲ್ಲಿ ಇನ್ನೊಬ್ಬ ಕವಿಯನ್ನೂ ಕ್ರಿಕೆಟ್‌ನಲ್ಲಿ ಇನ್ನೊಬ್ಬ ನಾಯಕನನ್ನೂ ‘ವಿಮರ್ಶಕರು’ ಕಂಡುಕೊಂಡದ್ದೇ ಕಾರಣವಿರಬಹುದು. ಸಾಮಾಜಿಕ ಸಾಂಸ್ಕೃತಿಕ ಅಸಮಾನತೆ ಮತ್ತು ವೈರುಧ್ಯಗಳ ಈ ನೆಲದಲ್ಲಿ ಇದು ಸ್ವಾಭಾವಿಕವೆನ್ನುವಷ್ಟು ಸಲೀಸಾಗಿದೆ.

ವಾಸ್ತವವಾಗಿ ಕಪಿಲ್ ಮೊದಮೊದಲು ಉತ್ತಮ ನಾಯಕರೆಂದೇ ಹೆಸರು ಗಳಿಸಿದ್ದರು. ನಮ್ಮ ದೇಶಕ್ಕೆ ವಿಶ್ವಕಪ್ ಕ್ರಿಕೆಟ್ ಕಿರೀಟ ತೊಡಿಸಿದ ಏಕೈಕ ನಾಯಕ ಕಪಿಲ್ ಎನ್ನುವುದನ್ನು ನಾವು ಮರೆಯಬಾರದು. ೧೯೮೩ರ ವಿಶ್ವಕಪ್ ಫೈನಲ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತದ ತಂಡ ೧೮೩ಕ್ಕೆ ಎಲ್ಲಾ ವಿಕೆಟ್ ಕಳೆದುಕೊಂಡಾಗ ಪ್ರಬಲ ವೆಸ್ಟ್ ಇಂಡೀಸ್ ರನ್ನು ೧೮ ರನ್ನುಗಳೊಳಗೇ ಆಲ್‌ಔಟ್ ಮಾಡುವುದು ಕನಸೇ ಆಗಿತ್ತು. ಆದರೆ ನಾಯಕ ಕಪಿಲ್‌ದೇವ್ ಚಾಣಾಕ್ಷತನದ ಬೌಲಿಂಗ್ ಬದಲಾವಣೆಗಳಿಂದ ಮತ್ತು ತಾವೇ ಹಿಡಿದ ಅದ್ಭುತ ಕ್ಯಾಚ್‌ನಿಂದ ಆಟಕ್ಕೆ ತಿರುವು ನೀಡಿದರು. ವಿಶ್ವಕಪ್ ಗೆದ್ದರು. ಈಗ ವೆಸ್ಟ್ ಇಂಡೀಸ್ ತಂಡದ ನಾಯಕರಾಗಿದ್ದ ಕೈವ್ ಲಾಯ್ಡ್ ಒಂದು ಕಡೆ ಬರೆದರು.

ಅಷ್ಟೇನೂ ಅನುಭವಿಗಳಲ್ಲದ ತಂಡದ ನಾಯಕತ್ವ ವಹಿಸಿದ್ದ ಕಪಿಲ್‌ದೇವ್ ಎಲ್ಲ ಆಟಗಾರರನ್ನೂ ಚೆನ್ನಾಗಿ ಸಂಘಟಿಸಿದ; ದುಡಿಸಿಕೊಂಡ; ಅತ್ಯಂತ ಸೂಕ್ಷ್ಮ ಮತಿ ಯಿಂದ ನಾಯಕತ್ವವನ್ನು ನಿಗಾವಹಿಸಿ ಪ್ರಪಂಚದಲ್ಲೇ ಪ್ರಬಲ ತಂಡವನ್ನಿಸಿಕೊಂಡಿದ್ದ ನಮ್ಮನ್ನು ಸೋಲಿಸಿದ.

ಅಂದಿನಿಂದ ‘ಕಪಿಲ್ ಡೆವಿಲ್ಸ್’ ಎಂದೇ ಖ್ಯಾತವಾಗಿದ್ದ ಭಾರತದ ತಂಡಕ್ಕೆ ವಿಶೇಷ ಗೌರವ ಮತ್ತು ಕಪಿಲ್ ನಾಯಕತ್ವಕ್ಕೆ ವಿಶೇಷ ಮನ್ನಣೆ ದಕ್ಕಿದ್ದು ನಿಜವಾದರೂ ಅನಂತರ ನಾಯಕತ್ವದ ಬಗ್ಗೆ ಟೀಕೆಗಳು ಕೇಳಿದ ಬರತೊಡಗಿದವು. ಕಪಿಲ್ ಅಷ್ಟು ಬುದ್ಧಿವಂತನಲ್ಲವೆಂದು ಕೆಲವು ಗುತ್ತಿಗೆದಾರರು ಪ್ರಚಾರ ಮಾಡತೊಡಗಿದರು. ಗೆದ್ದೆತ್ತಿನ ಬಾಲ ಹಿಡಿಯುವ ಪ್ರವೃತ್ತಿಗೆ ಒಗ್ಗಿಕೊಂಡಿರುವ ಭಾರತದ ಬುದ್ದಿವಂತರು ಕಪಿಲ್‌ದೇವ್ ಈಗ್ಗೆ ಹದಿನೈದು ದಿನಗಳ ಹಿಂದೆ ವೆಸ್ಟ್ ಇಂಡೀಸರಿಗೆ ಒಂದೇ ಓವರ್‌ನಲ್ಲಿ ಹೆಚ್ಚು ರನ್ ಕೊಟ್ಟಿದ್ದಕ್ಕೆ ಮೊದಲೇ ಹೇಳಿದಂತೆ ಕಪಿಲ್‌ ಕಾಲ ಮುಗಿದೇಹೋಯಿತೆಂದು ಕಾಲೆಳೆಯತೊಡಗಿದರು. ಹೀಗೆಂದ ಕೂಡಲೆ ಕಪಿಲ್ ತನ್ನ ಬೌಲಿಂಗ್‌ನಲ್ಲಿ ಸೋತದ್ದನ್ನು ಸಮರ್ಥಿಸಬೇಕಾಗಿಲ್ಲ: ಆದರೆ ಅನಗತ್ಯವಾಗಿ ಅಗೌರವ ಸೂಚಿಸಬೇಕಾಗಿಯೂ ಇಲ್ಲ. ಹೀಗೆ ಸಣ್ಣ ಪುಟ್ಟದ್ದಕ್ಕೂ ಟೀಕೆಗಳನ್ನು ಎದುರಿಸುತ್ತ ಬಂದ ಕಪಿಲ್ ಮತ್ತಷ್ಟು ಕಾಲ ಆಡುವ ಆಸೆಯನ್ನು ಬದಿಗೊತ್ತಿ, ನಿವೃತ್ತಿಯನ್ನು ಘೋಷಿಸಿದರು.

ತಮ್ಮ ಮೆಚ್ಚಿನ ಈಡನ್‌ಗಾರ್ಡನ್ (ಕಲ್ಕತ್ತ) ಕ್ರೀಡಾಂಗಣದಲ್ಲಿ ನಿವೃತ್ತಿ ಮಾಡಬೇಕೆಂದುಕೊಂಡಿದ್ದ ಕಪಿಲ್ ಆಸೆ ಕೊನೆಗೂ ಕೈಗೂಡಲಿಲ್ಲ. ಅದಕ್ಕೆ ನಮ್ಮ ಅನಾರೋಗ್ಯಕರ ಸಂದರ್ಭ ಅವಕಾಶ ಕೊಡಲಿಲ್ಲ.

‘ಈ ನಿವೃತ್ತಿ ನಿರ್ಧಾರ ನನ್ನದಲ್ಲ’ ಎಂದು ಹೇಳಿಕೊಂಡಿರುವ ಕಪಿಲ್ ಹೊರ ಒತ್ತಡಗಳನ್ನು ಧ್ವನಿಸಿದ್ದಾರೆ. ಅಂದುಕೊಂಡಿದ್ದಕ್ಕಿಂತ ಮುಂಚೆಯೇ ಕ್ರಿಕೆಟ್‌ನಿಂದ ಹೊರಬೀಳುತ್ತಿರುವ ಅವರ ನಿರ್ಧಾರದಲ್ಲಿ ವಿಷಾದ ತುಂಬಿರುವಂತೆ ಕಾಣುತ್ತಿದೆ. ನನ್ನಲ್ಲಿ ತುಂಬಿರುವ ವಿಷಾದವೂ ಈ ಅನಿಸಿಕೆಗೆ ಒಂದು ಕಾರಣವಿರಬಹುದು.

ಒಂದಂತೂ ಸತ್ಯ : ಕಪಿಲ್ ಇಲ್ಲದೆಯೂ ಕ್ರಿಕೆಟ್ ಇರುತ್ತದೆ. ಆದರೆ ಬ್ಯಾಟು ಮತ್ತು ಬಾಲುಗಳನ್ನು ಬದುಕಿನ ಭಾವಕೋಶವನ್ನಾಗಿಸಿಕೊಂಡಿದ್ದ ‘ಕಪಿಲ್ ಕ್ರಿಕೆಟ್’ ಇನ್ನು ಇರುವುದಿಲ್ಲ. ಇದು ನನ್ನ ಸಂಕಟ.
*****
೧೩-೧೧-೧೯೯೪

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒಬ್ಬಂಟಿ
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೫

ಸಣ್ಣ ಕತೆ

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

cheap jordans|wholesale air max|wholesale jordans|wholesale jewelry|wholesale jerseys